No.252,18th cross, Sadashiva Nagar, Bangalore – 560080 India.

ಕಾವೇರಿ ಕೊಳ್ಳದ ಬಾಕಿ ಯೋಜನೆಗಳ ಆರಂಭಕ್ಕೆ ತಾತ್ವಿಕ ಒಪ್ಪಿಗೆ

ಕಾವೇರಿ ಕೊಳ್ಳದ ಬಾಕಿ ಯೋಜನೆಗಳ ಆರಂಭಕ್ಕೆ ತಾತ್ವಿಕ ಒಪ್ಪಿಗೆ

ಬೆಂಗಳೂರು: ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾವೇರಿ ಕೊಳ್ಳದ ಯೋಜನೆಗಳನ್ನು ಹಣಕಾಸು ಸ್ಥಿತಿಗೆ ಅನುಗುಣವಾಗಿ ಆರಂಭಿಸಲು ರಾಜ್ಯ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಮಂಡ್ಯ ಜಿಲ್ಲೆ ಸಚಿವರು ಹಾಗೂ ಶಾಸಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಕೆ.ಆರ್.ಎಸ್ ನಿಂದ ಕೃಷಿಭೂಮಿಗೆ ನೀರು ಪೂರೈಸುವ ವಿ.ಸಿ. ನಾಲೆ ಆಧುನೀಕರಣ, ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳ ಅಭಿವೃದ್ಧಿ, ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯ ನಾನಾ ಕೆರೆಗಳಿಗೆ ನೀರು ತುಂಬಿಸುವುದು, ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ, ಮಾರ್ಕೋನಹಳ್ಳಿ ಮತ್ತು ಸಾಲಿಗ್ರಾಮದಿಂದ ಚುಂಚನಗಿರಿ, ಒಣಕೆರೆ ಮಾರ್ಗವಾಗಿ ನಾಗಮಂಗಲಕ್ಕೆ ಕುಡಿಯುವ ನೀರು ಪೂರೈಕೆ, ಮಳವಳ್ಳಿ ನಾಲೆ ಆಧುನೀಕರಣ, ಮದ್ದೂರಿನ ಏತ ನೀರಾವರಿ ಸೇರಿದಂತೆ ನಾನಾ ಯೋಜನೆಗಳು ಬಾಕಿ ಉಳಿದಿರುವ ಯೋಜನೆಗಳಲ್ಲಿ ಸೇರಿವೆ.

ಬೆಂಗಳೂರಿನಿಂದ ಬಂಟ್ವಾಳದವರೆಗಿನ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಮಣ್ಣನ್ನು ಅಸುಪಾಸಿನ ಕೆರೆಗಳಿಂದ ಹೂಳೆತ್ತಿ ಬಳಸಿಕೊಳ್ಳಲು ಇದೇ ಸಂದರ್ಭದಲ್ಲಿ ತೀರ್ಮಾನಿಸಲಾಗಿದೆ. ಒಂದು ಕಡೆ ಕೆರೆಯಿಂದ ಹೂಳೆತ್ತಿದಂತೆಯೂ ಆಗುತ್ತದೆ, ಇನ್ನೊಂದೆಡೆ ರಸ್ತೆ ಕಾಮಗಾರಿಗೆ ಅದೇ ಮಣ್ಣನ್ನು ಬಳಸಿಕೊಂಡಂತೆಯೂ ಆಗುತ್ತದೆ ಎಂಬುದು ಈ ನಿರ್ಣಯದ ಹಿಂದಿರುವ ದ್ವಿಮುಖ ಉದ್ದೇಶ.

ಕಾವೇರಿ ಕೊಳ್ಳದ ಯಾವುದೇ ಯೋಜನೆಗಳನ್ನು ಬಾಕಿ ಉಳಿಸುವುದಿಲ್ಲ. ಹಣಕಾಸು ಲಭ್ಯತೆ ಅಧರಿಸಿ ಹಂತ-ಹಂತವಾಗಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಸಭೆಯಲ್ಲಿ ತಿಳಿಸಿದರು.

ಸಚಿವರಾದ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಶಾಸಕರಾದ ಎಂ. ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ, ಅಂದಾನಿ, ಸುರೇಶ್ ಗೌಡ ಅವರು ಮೊದಲಿಗೆ ಡಿ.ಕೆ. ಶಿವಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಪೂರ್ವಭಾವಿ ಸಮಾಲೋಚನೆ ನಡೆಸಿದರು. ನಂತರ ಮಂಡ್ಯ ನಿಯೋಗವನ್ನು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾಗೆ ಕರೆದೊಯ್ದು, ಸಿಎಂ ಕುಮಾರಸ್ವಾಮಿ ಅವರ ಜತೆ ಚರ್ಚಿಸಿದರು. ಇದೇ ಸಂದರ್ಭದಲ್ಲಿ, ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳಿಗೆ ಕಾವೇರಿ ಕೊಳ್ಳದ ಬಾಕಿ ಯೋಜನೆಗಳ ಆರಂಭ ಕುರಿತು ಪ್ರಸ್ತಾವನೆ ಸಲ್ಲಿಸಲಾಯಿತು.